ಭಾಷೆ
ಕನ್ನಡ ಮತ್ತು ತಮಿಳು

ತಮಿಳು, ಮೊದಲ ಹಂತದಿಂದಲೂ ಕನ್ನಡದೊಡನೆ ನಿಕಟವಾದ ಸಂಬಂಧವನ್ನು ಹೊಂದಿರುವ ಭಾಷೆ. ಭಾಷಾಶಾಸ್ತ್ರಜ್ಞರು ಇವೆರಡು ಭಾಷೆಗಳನ್ನೂ ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿಸುತ್ತಾರೆ. ಕನ್ನಡಕ್ಕೆ, ತೆಲುಗು ಮತ್ತು ಮಲಯಾಳಂ ಭಾಷೆಗಳಿಗಿಂತ ಹೆಚ್ಚು ಹತ್ತಿರದ ಸಂಬಂಧವು ತಮಿಳಿನೊಂದಿಗೆ ಇದೆ. ಕರ್ನಾಟಕಕ್ಕೆ ತಮಿಳುನಾಡಿನ ಸಾಕಷ್ಟು ದೀರ್ಘವಾದ ಗಡಿಗಳಿವೆ. ಇವೆರಡೂ ರಾಜ್ಯಗಳಲ್ಲಿರುವ ಎಷ್ಟೋ ಪ್ರದೇಶಗಳನ್ನು, ಕರ್ನಾಟಕ ಮತ್ತು ತಮಿಳುನಾಡಿನ ರಾಜಮನೆತನಗಳು ಆಳಿವೆ. ಈ ಚಕ್ರವರ್ತಿಗಳು ಮತ್ತು ರಾಜರುಗಳು, ತಮ್ಮ ಆಡಳಿತದ ಅವಧಿಯಲ್ಲಿ, ಸಾಮಾನ್ಯವಾಗಿ ಎರಡು ಭಾಷೆಗಳಿಗೂ ಪ್ರೋತ್ಸಾಹ ನೀಡಿದ್ದಾರೆ. ತಮಿಳಿನ ಅನೇಕ ಕೃತಿಗಳು ಕನ್ನಡಕ್ಕೆ ಅನುವಾದವಾಗಿವೆ ಹಾಗೂ ಅದರ ಸಾಹಿತ್ಯದ ಮೇಲೆ ಪ್ರಭಾವ ಬೀರಿವೆ. ಕನ್ನಡದ ಕೃತಿಗಳೂ ತಮಿಳಿಗೆ ಹೋಗಿವೆ. ಕನ್ನಡ ಕವಿ ಹರಿಹರನು ಬರೆದ ಶಿವಗಣದ ರಗಳೆಗಳ ಮೇಲೆ, ತಮಿಳಿನ ಪೆರಿಯ ಪುರಾಣದ ದಟ್ಟವಾದ ಪ್ರಭಾವವಿದೆ. ಕನ್ನಡಕಾವ್ಯದ ಛಂದಸ್ಸು ಮತ್ತು ಕಾವ್ಯಮೀಮಾಂಸೆಗಳ ಮೇಲಿನ, ಸಂಸ್ಕೃತದ ಪ್ರಭಾವವು, ಎಷ್ಟೋ ಕಾಲ, ಈ ತಮಿಳು ನೆಲೆಗಳನ್ನು ಮರೆಮಾಡಿತ್ತೆನ್ನುವುದು ನಿಜ. ಒಟ್ಟಂದದಲ್ಲಿ ಆರ್ಯಸಂಸ್ಕೃತಿ ಮತ್ತು ನಿರ್ದಿಷ್ಟವಾಗಿ ಸಂಸ್ಕೃತಭಾಷೆಯ ಬಗ್ಗೆ ಕರ್ನಾಟಕವು ತಳೆದ ಒಳಗೊಳ್ಳುವ ನಿಲುವು, ಸ್ವಲ್ಪ ಮಟ್ಟಿಗೆ ಅದರ ದ್ರಾವಿಡ ನೆಲೆಗಟ್ಟುಗಳ ಕುಸಿತಕ್ಕೆ ಕಾರಣವಾಗಿದೆ. ಇದಕ್ಕೆ ವಿರುದ್ಧವಾಗಿ, ಆರ್ಯ/ಸಂಸ್ಕೃತ ನೆಲೆಗಳನ್ನು ಬುದ್ಧಿಪೂರ್ವಕವಾಗಿಯೇ ಹೊರಗಿಡಲು ಯತ್ನಿಸಿದ ತಮಿಳು ಭಾಷೆಯು, ಕನ್ನಡಕ್ಕೆ ಹೋಲಿಸಿದರೆ ತನ್ನ ದ್ರಾವಿಡತನವನ್ನು ಬಹುಮಟ್ಟಿಗೆ ಕಾಪಾಡಿಕೊಂಡು ಬಂದಿದೆ.

ತಮಿಳು ಸಂಸ್ಕೃತಿಯ ಈ ದೃಷ್ಟಿಕೋನವು, ಕನ್ನಡ ಮತ್ತು ತಮಿಳು ವ್ಯಾಕರಣಗಳನ್ನು ಹೋಲಿಸಿನೋಡಿದಾಗ ಸ್ಪಷ್ಟವಾಗುತ್ತದೆ. ತಮಿಳು ವರ್ಣಮಾಲೆಯಲ್ಲಿ ಮಹಾಪ್ರಾಣಾಕ್ಷರಗಳು ಇಲ್ಲ. ಇದರ ಫಲವಾಗಿ ಸಂಸ್ಕೃತದಿಂದ ತಮಿಳಿಗೆ ಬಂದ ಅನೇಕ ಪದಗಳು, ಧ್ವನಿ ಬದಲಾವಣೆಯನ್ನು ಪಡೆದು, ತಮಿಳಿಗೆ ಒಗ್ಗಿಕೊಳ್ಳುತ್ತವೆ. ತಮಿಳು ಭಾಷೆಯಲ್ಲಿ ಘೋಷ ಮತ್ತು ಅಘೋಷ ಧ್ವನಿಗಳ ಉಚ್ಚಾರಣೆಯು, ಅವು ಒಟ್ಟು ಪದದಲ್ಲಿ ಕಾಣಿಸಿಕೊಳ್ಳುವ ಪರಿಸರವನ್ನು ಅವಲಂಬಿಸಿರುತ್ತದೆ. (ಪದದ ಮೊದಲಿನಲ್ಲಿ ಬಂದರೆ ಅಘೋಷ, ಉಳಿದ ಕಡೆ ಬಂದರೆ, ಘೋಷ) ಆದ್ದರಿಂದಲೇ, ಆ ಭಾಷೆಯ ಲಿಪಿಯಲ್ಲಿ, ಘೋಷ-ಅಘೋಷಗಳನ್ನು ಬರೆಯಲು ಬೇರೆ ಬೇರೆ ಅಕ್ಷರಗಳಿಲ್ಲ. ಕನ್ನಡದಲ್ಲಾದರೋ ಈ ಎಲ್ಲ ಅಕ್ಷರಗಳಿಗೂ ಬೇರೆ ಬೇರೆಯಾದ ಲಿಪಿಸಂಕೇತಗಳಿವೆ. ಆದ್ದರಿಂದ ಕನ್ನಡ ಮಾತನಾಡುವ ಸಮುದಾಯಗಳು ಮಾತು ಹಾಗೂ ಬರವಣಿಗೆಯಲ್ಲಿ ಆಯಾ ಧ್ವನಿಗಳನ್ನೇ ಬಳಸುವುದು ಅನಿವಾರ್ಯವಾಗುತ್ತದೆ. ಹಾಗೆಯೇ ಘರ್ಷ ವ್ಯಂಜನಗಳಾದ ಶ ಮತ್ತು ಷ ಕಾರಗಳನ್ನು ಸೂಚಿಸಲು ಕನ್ನಡದಲ್ಲಿ ಭಿನ್ನವಾದ ಲಿಪಿಸಂಕೇತಗಳಿವೆ. ತಮಿಳಿನಲ್ಲಿ ಆ ಧ್ವನಿಗಳೇ ಇಲ್ಲ. ಈ ಮಾತು ಪಾರ್ಶ್ವಿಕ ಹಾಗೂ ತಾಡಿತ ವ್ಯಂಜನಗಳ ವಿಷಯದಲ್ಲಿಯೂ ನಿಜ. ತಮಿಳಿನಲ್ಲಿ ಇಂದಿಗೂ ಉಳಿದಿರುವ ಕೆಲವು ಮೂಲದ್ರಾವಿಡ ಧ್ವನಿಗಳು ಕನ್ನಡದಿಂದ ಮಾಯವಾಗಿವೆ.

ಈ ಸನ್ನಿವೇಶವು ಧ್ವನಿರಚನೆ ಮತ್ತು ಪದರಚನೆಗೆ ಸಂಬಂಧಿಸಿದ ನಿಯಮಗಳ ವಿಚಾರದಲ್ಲಿಯೂ ನಿಜ. ತಮಿಳು ಬಹುಮಟ್ಟಿಗೆ ಮೂಲದ್ರಾವಿಡ ನಿಯಮಗಳನ್ನು ಕಾಪಾಡಿಕೊಂಡಿದೆ ಮತ್ತು ಕನ್ನಡವು ಹೊರಗಿನ ಪ್ರಭಾವಗಳಿಗೆ ಮಣಿದಿದೆ. ತಮಿಳುಭಾಷೆಯು, ಸಂಸ್ಕೃತ ಹಾಗೂ ಇಂಗ್ಲಿಷ್ ಗಳಿಂದ ಎರವಲು ತೆಗೆದುಕೊಂಡಿರುವ ಪದಗಳಲ್ಲಿ ತನ್ನ ರಚನೆಗೆ ಅನುಗುಣವಾದ ಬದಲಾವಣೆಗಳನ್ನು ಮಾಡಿಕೊಂಡಿದೆ. ಆದ್ದರಿಂದಲೇ ಆ ಭಾಷೆಯಲ್ಲಿ, ಸಂಸ್ಕೃತ ಪದಗಳನ್ನು ಹಾಗೆಹಾಗೆಯೇ ಉಪಯೋಗಿಸುವ ತತ್ಸಮ ರೂಪಗಳು ಬಹಳ ಬಹಳ ಕಡಿಮೆ. ಬದಲಾಗಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಬದಲಾಗಿರುವ ತದ್ಭವ ರೂಪಗಳನ್ನು ಅದು ಹೇರಳವಾಗಿ ಬಳಸಿಕೊಂಡಿದೆ. ಈ ಎರಡು ವಿಧಾನಗಳನ್ನೂ ಅನುಸರಿಸುವ ಕನ್ನಡದಲ್ಲಿ ತತ್ಸಮಗಳೂ ಇವೆ, ತದ್ಭವಗಳೂ ಇವೆ. ಉದಾಹರಣೆಗೆ, ಸಂಸ್ಕೃತದ ಲೋಕ ಎನ್ನುವ ಪದವು ತಮಿಳಿನಲ್ಲಿ ಉಲಗಂಎಂಬ ರೂಪವನ್ನು ಪಡೆದರೆ, ಕನ್ನಡದಲ್ಲಿ ಲೋಕ ಎಂದೇ ಉಳಿಯುತ್ತದೆ. ಎಷ್ಟೋ ಸಲ, ಕನ್ನಡದಲ್ಲಿ ಒಂದು ಪದದ ತತ್ಸಮ ಮತ್ತು ತದ್ಭವ ರೂಪಗಳಿಗೆ ಬೇರೆ ಬೇರೆ ಅರ್ಥಗಳಿರುತ್ತವೆ. (ಯಾತ್ರೆ-ಜಾತ್ರೆ, ಸಂಸ್ಥೆ-ಸಂತೆ ಇತ್ಯಾದಿ)

ತಮಿಳಿನಲ್ಲಿ ಉಳಿದುಕೊಂಡಿರುವ ಎಷ್ಟೋ ಮೂಲದ್ರಾವಿಡ ಪದಗಳು, ಕನ್ನಡದಲ್ಲಿ ಸಂಸ್ಕೃತಕ್ಕೆ ಎಡೆ ಮಾಡಿಕೊಟ್ಟು ಕಾಣೆಯಾಗಿವೆ.

ಈಚಿನ ವರ್ಷಗಳಲ್ಲಿ ಕನ್ನಡದ ಹಿರಿಯ ಭಾಷಾಶಾಸ್ತ್ರಜ್ಞರಾದ ಡಿ.ಎನ್.ಶಂಕರ ಭಟ್ ಮತ್ತು ಕೆ.ವಿ.ನಾರಾಯಣ ಹಾಗೂ ಇತಿಹಾಸತಜ್ಞರಾದ ಷ. ಶೆಟ್ಟರ್ ಅವರು ಪ್ರಾಚೀನ ಕಾಲದ ತಮಿಳು-ಕನ್ನಡ ಸಂಬಂಧಗಳ ಮೇಲೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಶಂಕರ ಭಟ್ಟರ ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಶೆಟ್ಟರ್ ಅವರ ಸಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ಮತ್ತು ಕೆ.ವಿ. ನಾರಾಯಣ ಅವರ ಕನ್ನಡ-ಅರ್ಧ ಶತಮಾನಗಳು ಈ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಕೃತಿಗಳು. ಮೂರೂ ಪುಸ್ತಕಗಳಲ್ಲಿ ತಮಿಳು ಮತ್ತು ಬೇರೆ ಕೆಲವು ಸಂಬಂಧಿತ ಭಾಷೆಗಳ ಇತಿಹಾಸ ಮತ್ತು ಇಂದಿನ ಸ್ಥಿತಿಯ ಅಧ್ಯಯನದಿಂದ ದೊರೆಯುವ ಸಾಕ್ಷಿಗಳನ್ನು ಬಳಸಿಕೊಂಡು ಕನ್ನಡ ಭಾಷೆಯ ಇತಿಹಾಸವನ್ನು ಮತ್ತೆ ಕಟ್ಟುವ ಪ್ರಯತ್ನವಿದೆ. ಕನ್ನಡವು ಸಂಸ್ಕೃತದಿಂದ ಹಲವು ಸಂಗತಿಗಳನ್ನು ಪಡೆದಿದೆಯೆಂಬ ಸಂಗತಿಯನ್ನು ಇವರು ಅಲ್ಲಗಳೆಯುವುದಿಲ್ಲ. ಆದರೆ, ಹಾಗೆ ಒಪ್ಪಿದ ನಂತರವೂ ಕನ್ನಡದ ದ್ರಾವಿಡ ಮೂಲಗಳನ್ನು ಕಂಡುಕೊಳ್ಳುವ, ಆ ಆಕರಗಳನ್ನು ಬಳಸಿಕೊಳ್ಲುವ ಉಮೇದನ್ನು ಅವರು ತೋರಿಸಿದ್ದಾರೆ.

ಆದರೆ, ಶೆಲ್ಡನ್ ಪೊಲಾಕ್, ಕೆ.ವಿ.ಸುಬ್ಬಣ್ಣ, ಡಿ.ಆರ್. ನಾಗರಾಜ್ ಮುಂತಾದ ವಿದ್ವಾಂಸರು ಕನ್ನಡ ಸಾಹಿತಿಗಳು ಮಾಡಿದ ಸಂಸ್ಕೃತವನ್ನು ಒಳಗೊಳ್ಳುವ ಪ್ರಯತ್ನಗಳಿಂದ ಕನ್ನಡ ಸಂಸ್ಕೃತಿಗೆ ಸಾಕಷ್ಟು ಲಾಭವಾಗಿದೆಯೆಂದು ವಾದಿಸಿದ್ದಾರೆ. ಅವರ ಪ್ರಕಾರ ಬಹುಸಂಸ್ಕೃತಿಗಳ ನಡುವೆ ಏರ್ಪಡುವ ಕೊಳುಕೊಡೆಯು ಬಹಳ ಆರೋಗ್ಯಕರವಾದುದು. ಡಾ. ಕಾರ್ಲೋಸ್ ಅವರು ತಮಿಳು ಕಾವ್ಯಮೀಮಾಂಸೆಯನ್ನು ಕುರಿತಂತೆ ಬರೆದಿರುವ ಪುಸ್ತಕದಲ್ಲಿ, ಆ ಮೀಮಾಂಸೆಯ ದ್ರಾವಿಡನೆಲೆಗಳನ್ನು ತೋರಿಸಿಕೊಟ್ಟಿದ್ದಾರೆ.

ಸಾಹಿತ್ಯಕ್ಷೇತ್ರದಲ್ಲಿ ಈ ಎರಡು ಭಾಷೆಗಳ ನಡುವಿನ ಸಂಬಂಧವು ಸಂಕೀರ್ಣವಾಗಿದೆ. ಪ್ರಾಚೀನ ಕಾಲದಲ್ಲಿ, ಈ ಎರಡು ಭಾಷೆಗಳು ಶಬ್ದಕೋಶ, ಛಂದಸ್ಸು, ಕಾವ್ಯಶೈಲಿ ಮತ್ತು ಮೀಮಾಂಸೆಗಳಲ್ಲಿ ಅನೇಕ ಸಮಾನ ನೆಲೆಗಳನ್ನು ಪಡೆದಿದ್ದವು ಎನ್ನುವುದರಲ್ಲಿ ಅನುಮಾನವಿಲ್ಲ. ಕನ್ನಡದ ಮೊದಮೊದಲ ಶಾಸನಗಳು ಈ ಮಾತಿಗೆ ವಿಪುಲವಾದ ಸಾಕ್ಷಿಗಳನ್ನು ಒದಗಿಸುತ್ತವೆ. ಕನ್ನಡ ಜನಪದಗೀತೆಗಳಲ್ಲಿ ಬಳಸಿರುವ ಅನೇಕ ಛಂದೋರೂಪಗಳು ಮತ್ತು ಛಂದೋಗ್ರಂಥಗಳಲ್ಲಿ ಹೆಸರಿಸಿರುವ ಮಟ್ಟುಗಳು ನಿಶ್ಚಿತವಾಗಿಯೂ ದ್ರಾವಿಡ ಮೂಲದವು. ಏಳೆ, ತ್ರಿಪದಿ, ಅಕ್ಕರ, ಷಟ್ಪರಿ, ಮದನವತಿ ಮುಂತಾದ ಛಂದೋಬಂಧಗಳು ತಮ್ಮ ಮೂಲರೂಪದಲ್ಲಿ ದ್ರಾವಿಡವೇ ಆಗಿವೆ. ಅನಂತರದ ಅವಧಿಯಲ್ಲಿ ಅವುಗಳಲ್ಲಿ ಕೆಲವು ಮಾತ್ರಾಗಣಗಳಿಗೆ ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಂಡಿವೆ. ನಾಗವರ್ನು ಹೆಸರಿಸಿರುವ ಅಂಶಗಣ ತ್ರಿಪದಿ, ಅಂಶಗಣ ಷಟ್ಪದಿಗಳು ಕನ್ನಡ, ತಮಿಳು ಮತ್ತು ತೆಲುಗುಗಳಿಗೆ ಸಮಾನವಾದವು.

ಆದರೆ, ಪಂಪ, ರನ್ನ ಮುಂತಾದ ಕವಿಗಳು ತಮ್ಮ ಕಾವ್ಯಗಳನ್ನು ರಚಿಸುವ ವೇಳೆಗೆ, ಸಂಸ್ಕೃತವು ಪ್ರಬಲವಾದ ಬೇರುಗಳನ್ನು ಪಡೆದುಕೊಂಡಿತ್ತು. ಈಗಾಗಲೇ ಹೇಳಿದಂತೆ, ಹರಿಹರನು ಪೆರಿಯ ಪುರಾಣದಿಂದ ಪ್ರಭಾವಿತನಾಗಿದ್ದಾನೆ. ಉಳಿದಂತೆ ಈ ಭಾಷೆಗಳ ನಡುವಿನ ಸಾಹಿತ್ಯಕ ಸಂಬಂಧವು ಆಗೀಗ ನಡೆದ ಅನುವಾದಗಳಿಗೆ ಸೀಮಿತವಾಗಿದೆ. ಕಳೆದ ಶತಮಾನದಲ್ಲಿ ಎಲ್ ಗುಂಡಪ್ಪನವರು ತಮಿಳಿನ ಹಲವು ಪ್ರಾಚೀನ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

 

ಮುಂದಿನ ಓದು ಮತ್ತು ಲಿಂಕುಗಳು:

    1. ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಡಿ.ಎನ್. ಶಂಕರ ಭಟ್, 1995, ಕನ್ನಡ ವಿಶ್ವವಿದ್ಯಾಲಯ, ಹಂಪಿ.
    2. ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ, ಷ. ಶೆಟ್ಟರ್, 2007, ಅಭಿನವ, ಬೆಂಗಳೂರು.
    3. ಕವಿರಾಜಮಾರ್ಗ ಮತ್ತು ಕನ್ನಡಜಗತ್ತು, ಕೆ.ವಿ.ಸುಬ್ಬಣ್ಣ, 2000, ಅಕ್ಷರ ಪ್ರಕಾಶನ, ಹೆಗ್ಗೋಡು.
    4. ಕನ್ನಡ -ಅರ್ಧ ಶತಮಾನ, ಕೆ.ವಿ.ನಾರಾಯಣ, 2007, ಕನ್ನಡ ವಿಶ್ವವಿದ್ಯಾಲಯ, ಹಂಪಿ.
    5. ತಮಿಳು ಕಾವ್ಯಮೀಮಾಂಸೆ, ಡಾ. ಕಾರ್ಲೋಸ್, ಅಕ್ಷರ ಪ್ರಕಾಶನ, ಹೆಗ್ಗೋಡು.

ಮುಖಪುಟ / ಭಾಷೆ